ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ಬ್ರಹ್ಮವಸ್ತು ಊಸರವಳ್ಳಿಯೇ?

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |
ಸೃಷ್ಟಿಯಲಿ ತತ್ವವೆಲ್ಲಿಯೊ ಬೆದಕಿ ನರನು ||
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೋ! |
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ ||			೩೪

(kakakakಕಷ್ಟಪಡುತಿರಲು+ಎನ್ನುವುದೇ)

ಈ ಸೃಷ್ಟಿಯ ಬಗ್ಗೆ ನಾವೆಷ್ಟು ಯೋಚಿಸಿದರೂ ಸಹ, ನಮ್ಮಲ್ಲಿ ಒಂದು ವಿಧವಾದ, ಸಂದೇಹ ಮತ್ತು ಅಳುಕು ಬೆಳೆಯುತ್ತ ಹೋಗುತ್ತದೆ. 
ಇದರಲ್ಲಿ ಏನಾದರು ಸಿದ್ಧಾಂತವಿದೆಯೆಂದು ಹುಡುಕುತ್ತ ಹೋದರೆ, ಈ ಬ್ರಹ್ಮ ವಿಧಿಯ ಪ್ರಕಾರ ನಾವು ಕಷ್ಟಪಡುತ್ತಲೇ ಇರಬೇಕು. ಇಷ್ಟೇ ನಮ್ಮ ಅವಸ್ಥೆಯೆಂದೆನಿಸುತ್ತದೆ.

ಇರಬೊಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ ||			೩೫

ಬಹಳಷ್ಟು ಕಾಲ ಯೋಚನೆ ಮಾಡಿ, ಕೆಲಸವನ್ನೂ ಮಾಡಿ, ಬ್ರಹ್ಮ ಈ ಜಗತ್ತನ್ನು ಸೃಷ್ಟಿ ಮಾಡಿದ. 
ಅವನು ಅಷ್ಟು ಕಾಲ ಕಳೆದು ಕಷ್ಟಪಟ್ಟು ರಚಿಸಿ(ನಿರವಿಸು) ದ್ದುದನ್ನು, ಒಬ್ಬ ಮೃತಿ ಹೊಂದುವ ಮನುಷ್ಯ(ಮರ್ತ್ಯನರನು), 
ಅರ್ಥಮಾಡಿಕೊಂಡು ಬಿಟ್ಟರೆ, ಇದನ್ನು ರೂಪಿಸಿದ ಅವನ ಹೆಚ್ಚುಗಾರಿಕೆಗೆ, ಒಂದು ಕೊರತೆ ಉಂಟಾಗುತ್ತದಲ್ವೆ? ಆದುದರಿಂದಲೇ 
ಈ ಸೃಷ್ಟಿಯ ರಹಸ್ಯವನ್ನು ಪರಿಪೂರ್ನವಾಗಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು, ಅವನು ನಮಗೆ ಕೊಡಲಿಲ್ಲ.

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೋ? - ಮಂಕುತಿಮ್ಮ ||			೩೬

(ಗೆಲ್ಲಲಿಲ್ಲ+ಇವನು+ಆ) (ಪರೀಕ್ಷೆ+ಓಳಗೆ+ಎಂದು)

ಈ ಜಗತ್ತಿನ ಸುತ್ತ ಮುಟ್ಟಲೂ ಆಡಂಬರ ಮತ್ತು ವೈಭವಗಳನ್ನು ಮುಚ್ಚಿಟ್ಟು (ಕವಿಸಿ). 
ಯೋಗ್ಯವಲ್ಲದ ಕೆಟ್ಟ ದಾರಿಗಳಲ್ಲಿ(ಸಲ್ಲದ ಕುಮಾರ್ಗದೊಳು). ಮನುಷ್ಯನನ್ನು ನಡೆಸಿ, ನಂತರ, ಈ ಪ್ರೀಕ್ಷೆಯಲ್ಲಿ ನೀನು ಗೆಲ್ಲಲಿಲ್ಲವೆಂದು ಹೇಳುವುದು(ಸೊಲ್ಲಿಪುದು) ಸರಿಯೇನು?

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು? ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೋ? - ಮಂಕುತಿಮ್ಮ ||			೩೭

(ವಿಷ್ವ+ದೇಹದ+ಒಳು+ಎನ್ನ) (ಮಾರ್ಪಡುತಲು+ಇಹವು) (ತವಕಪಡನು+ಏತಕೊ) (ಅವಿತುಕೊಂಡು+ಇಹುದು+ಏಕೋ)

ಈ ಸ್ರೂಷ್ಟಿಅಯ್ ಪ್ರತಿಯೊಂದರಲ್ಲೂ ಬ್ರಹ್ಮ ತಳೆದು ಬಂದಿದ್ದನ್ನೆಉವುದಾದರೆ, ಅವನ ವೇಷಗಳೇತಕ್ಕೋಸ್ಕರ ಬದಲಾವಣೆಯಾಗುತ್ತಿವೆ? 
ತನ್ನ ಗುರುತನ್ನು(ಕುರುಹ) ನಮಗೆ ತೋರಿಸಲು ಆತುರಪಡದೆ, ಏತಕ್ಕಾಗಿ ಬಚ್ಚಿಟ್ಟುಕೊಂಡಿದ್ದಾನೇಯೋ, ನಮಗ ಅರ್ಥವಾಗುತಿಲ್ಲ.

ಬೇರೆಯಿಸಿ ನಿಮಿಷನಿಮಿಷಕಮೋಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮಂ? ||
ಪೂರ ಮೈದೋರೆನೆಂಬಾ ಕಪಟಿಯಂಶಾವ |
ತಾರದಿಂದಾರ್ಗೇನು? - ಮಂಕುತಿಮ್ಮ ||			೩೮

(ನಿಮಿಷ+ನಿಮಿಷಕಂ+ಒಡಲ+ಬಣ್ಣಗಳ) (ಕಪಟಿಯ+ಅಂಶಾವತಾರದಿಂದ+ಆರ್ಗೆ+ಏನು)

ಪ್ರತಿಯೋಮ್ದು ನಿಮಿಷಕ್ಕು ಬಣ್ಣ ಬದಲಾಯಿಸುವ ಊಸರವಳ್ಳಿಯ ತರಹವೇನು ಈ ಪರಬ್ರಹ್ಮ? 
ಈ ರೀತಿಯಾಗಿ ತನ್ನ ಪೂರ್ತಿದೇಹವನ್ನು ತೋರಿಸದಿರುವ, ಮೋಸದವನ ಒಂದು ಭಾಗ ಮಾತ್ರ ಕಾಣಿಸಿಕೊಳ್ಳುವಿಕೆಯಿಂದ(ಅಂಶಾವತಾರ), ನಮಗ ಆಗಬೇಕಾದುದ್ದೇನಿಲ್ಲ.

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ವರ್ಗ:ಡಿ.ವಿ.ಜಿ. ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ
 ಮಂಕುತಿಮ್ಮನ ಕಗ್ಗ